ಮತ್ತೊಂದಿಷ್ಟು ತುಂಡು ಭಾವಗಳು.....
ಕುಡಿದ ಮತ್ತಿನಲಿ ಬಂದ ಗಂಡ, ಅವಳ ತಾಳಿಯನೆ ಕಿತ್ತ... ಕದಲಲಿಲ್ಲ ಅವಳು, ಬುದ್ಧನಂತಿದ್ದಳು... ಬದುಕನ್ನೇ ಕಸಿದುಕೊಂಡಿರುವಾಗ ತಾಳಿಯೇನು ಎಂಬ ಸ್ತಿಗ್ಧ ಭಾವ...
***
ಕೆಳಜಾತಿಯವನೆಂದು ಅವನಿಗೆ ಪ್ರಸಾದ ಕೊಡದ ಭಟ್ಟರು.. ಮನೆಗೆ ಬಂದು, ತಿಂಗಳ ಹಿಂದಷ್ಟೇ ಮಗನ ಮದುವೆಯಾದ ಅದೇ ಜಾತಿಯ ಸೊಸೆಯು ಮಾಡಿದ ಪಾಯಸ ಸವಿದರು...
***
ಲಂಗ ದಾವಣಿ ತೊಟ್ಟು, ದುಂಡು ಮಲ್ಲಿಗೆ ಮುಡಿದ ಮೊಮ್ಮಗಳ ನೋಡಿ, ಮತ್ಯಾರನೋ ನೆನೆದ ಅಜ್ಜನ ಬೊಚ್ಚು ಬಾಯಲ್ಲೊಂದು ಮಿಂಚಂತ ಕಿರುನಗೆ...
***
ನಿನ್ನೆಯವರೆಗೂ ಸರಿಯಾಗಿದ್ದ ಮನಸಿಗೆ, ಹೆಂಡ ಕುಡಿಸಿದವರಾರು? ನಿನ್ನ ಕಣ್ಣಂಚಿನ ನೋಟದ ನಶೆಗೇ ಇರಬೇಕು.. ನಡುನೇರ ದಾರಿಯಲು ತಿರುತಿರುಗಿ ಬಿತ್ತು...
***
ಶಶಿಯು ತಾ ಬರಲು ಅವಳ ಮೊಗವರಳಿ, ಅವನ ನೆನಪಲೇ ಇರುಳ ಕಳೆದಳು.. ಬೆಳಕು ಹರಿಯಲು ಮನವು ಮುದುಡಿತು, ಅವಳ ಹೆಸರು ಪಾರಿಜಾತ..
***
ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ದೇಶಭಕ್ತಿಯ ಬಗ್ಗೆ ಗಂಟೆಗಟ್ಟಲೇ ಮಾತನಾಡಿದ ಗೆಳೆಯನೊಬ್ಬ, ಮೊನ್ನೆ 'Finally!! got Green Card!' ಎಂದು ಟ್ವೀಟಿಸಿದ್ದಾನೆ...