Saturday 29 June 2013

ಭಾವಾಂಕುರ


                ಹೊರಗೆ ಜಿಟಿ ಜಿಟಿ ಮಳೆ...  ಮಣ್ಣ ಹಸಿ ವಾಸನೆಯೊಡನೆ, ಕೈಯ್ಯಲ್ಲಿದ್ದ  ಕಾಫೀ ಪರಿಮಳ ಬೆರೆತು.. ಆಹಾ! ಎನ್ನುವಾಗ ಹೊರಬಂದ ಸಾಲುಗಳಿವು... ಕವನವೇನಲ್ಲ.. ತುಂಡು ಭಾವಗಳ ಪೋಣಿಸುವ ಯತ್ನ.. ಒಮ್ಮೆ ಓದಿ ಬಿಡಿ ... 


ಮುಂಗಾರ ಮಳೆಯ ಹನಿ
ಬೆಂಬಿಡದೆ ಕಾಡಿಹುದು 
ಹಸಿ ಮಣ್ಣಿನಂತೆಯೇ ಈ ಒಲವು... 
ಒಲವ  ಹೀರಿದ ಮನ 
ನೆನಪ ಸೂಸುತಿದೆ 
ನಿನ್ನದೇ ಘಮವು ಅನುದಿನವು ... 

ನಿನ್ನೆದೆಯ ಗೂಡಿನಲ್ಲಿ 
ಗುಬ್ಬಚ್ಚಿಯಾಗುವೆನು 
ಕಟ್ಟಿಟ್ಟ ಕನಸ ಸೂರಿನಡಿಗೆ... 
ನನ್ನ ಪ್ರತಿಬಿಂಬವು 
ಮುತ್ತಾಗಬೇಕು 
ನಿನ್ನ ಕಣ್ರೆಪ್ಪೆಯ ಚಿಪ್ಪಿನೊಳಗೆ... 

ತಂಪು ಗಾಳಿಗೆ 
ಮುಂಗುರುಳು ತಾನುಲಿದು  
ಅರಸುತಿದೆ ನಿನ್ನ ಬೆರಳ ತುದಿಯ... 
ಕೆನ್ನೆಯಂಚಿಗೆ 
ಸ್ವಲ್ಪ ಮೆತ್ತಿಬಿಡಲೇ 
ತುಟಿಯ ಮೇಲಿನ ಜೇನ ಹನಿಯ... 

ಜಿನುಗು ಮಳೆಯಲಿ  ನಿನ್ನ 
ಕೈಯ್ಯೊಳಗೆ ಕೈ ಬೆಸೆದು 
ಸಾಗಬೇಕೆನಗೆ ದೂರ ದೂರ... 
ಪ್ರೀತಿ ಸಿಂಚನಕೆ 
ತೊಡೆದುಹೋಗಿದೆ ತಿಮಿರ 
ಮನದ ಮೂಲೆಯಲೊಂದು ಭಾವಾಂಕುರ...!



8 comments:

  1. ನನ್ನ ಪ್ರತಿಬಿಂಬವು
    ಮುತ್ತಾಗಬೇಕು
    ನಿನ್ನ ಕಣ್ರೆಪ್ಪೆಯ ಚಿಪ್ಪಿನೊಳಗೆ...

    ಎಂಥಾ ಚಂದದ ಬಯಕೆ ....

    ಕೆನ್ನೆಯಂಚಿಗೆ
    ಸ್ವಲ್ಪ ಮೆತ್ತಿಬಿಡಲೇ
    ತುಟಿಯ ಮೇಲಿನ ಜೇನ ಹನಿಯ... ಎನ್ನುವ romantic ಸಾಲುಗಳು ..

    ಕವನವಲ್ಲ ಎಂದು ನೀ ಹೇಳಿದ ಕವನ ಚೆನ್ನಾಗಿದೆ .. :)

    ReplyDelete
  2. ನಿನ್ನೆದೆಯ ಗೂಡಿನಲ್ಲಿ
    ಗುಬ್ಬಚ್ಚಿಯಾಗುವೆನು
    ಕಟ್ಟಿಟ್ಟ ಕನಸ ಸೂರಿನಡಿಗೆ...
    ನನ್ನ ಪ್ರತಿಬಿಂಬವು
    ಮುತ್ತಾಗಬೇಕು
    ನಿನ್ನ ಕಣ್ರೆಪ್ಪೆಯ ಚಿಪ್ಪಿನೊಳಗೆ...
    ತುಂಬಾ ಚಂದದ ಸಾಲುಗಳಿವು....
    ಮನದ ಮೂಲೆಯಲ್ಲಿನ ಭಾವಾಂಕುರ ತುಂಬಾ ರಮ್ಯವಾಗಿ
    ಅಂದವಾಗಿ ಮೂಡಿ ಬಂದಿದೆ... ಕಲ್ಪನೆಗಳು ತುಂಬಾ ಇವೆ...
    ಮುಂದುವರೆಯಲಿ.....

    ReplyDelete
  3. kavanavalada bhaavagalu chennaagive, bareeri! :)

    ReplyDelete
  4. ಇಷ್ಟಪಟ್ಟು ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು... :)

    ReplyDelete
  5. ಸಾಹಿತ್ಯದ ಅಂಕುರ
    ಮೊಳಕೆಯೊಡೆದಿದೆ ಇಲ್ಲಿ
    ಶಬ್ಧಗಲು ಭಾವಗಳೊಡನೆ
    ಚೆಲ್ಲಾಟವಾಡಿದೆಯಿಲ್ಲಿ.

    ಉತ್ತಮ ಪ್ರಯತ್ನ. ಇನ್ನಷ್ಟು ಭಾವಗಳು ಹೊರಬರಲಿ.
    ಶುಭವಾಗಲಿ.

    ReplyDelete
    Replies
    1. ಧನ್ಯವಾದ ಪ್ರತಿಕ್ರಿಯೆಗೆ, ಪ್ರೊತ್ಸಾಹಕ್ಕೆ... :)

      Delete
  6. ಕವನ ಪ್ರಾಸಬದ್ಧವಾಗಿದ್ದು ಗೇಯವಾಗಿದೆ , ಕಮನೀಯವಾಗಿದೆ. ಇನ್ನಷ್ಟು, ಮತ್ತಷ್ಟು ಬರಲಿ

    ReplyDelete