Sunday 4 August 2013

ಲೋಕಕ್ಕೆ ಹುಚ್ಚು, ನಮಗೆ ಸ್ವಲ್ಪ ಹೆಚ್ಚು...

                  

                    ಭಾನುವಾರ ಬೆಳಿಗ್ಗೆ. ಕಷ್ಟಪಟ್ಟು ಮುಸುಕು ತೆಗೆದು, ಒಂದೇ ಕಣ್ಣಲ್ಲಿ ಮೊಬೈಲ್ ನೋಡಿದರೆ ಒಂದ್ ಡಜನ್ ಮಿಸ್ಡ್ ಕಾಲ್ಸ್ ಮತ್ತು ಒಂದೈವತ್ತು ನೋಟಿಫಿಕೇಶನ್ಗಳು. ಯಾರಪ್ಪಾ ಹೊಗೆ ಹಾಕ್ಸ್ಕೊಂಡ್ರು ಅಂತ ನೋಡಿದ್ರೆ 'ಹ್ಯಾಪಿ ಫ್ರೆಂಡ್ಶಿಪ್ ಡೇ' ಮೆಸೇಜ್ಗಳ ಜೊತೆ ಈಡಿಯಟ್, ಸ್ಟುಪಿಡ್, ಡಬ್ಬಾಸ್ ಪದಗಳು ಕಿಸಿ ಕಿಸಿ ನಗುತ್ತಿದ್ದವು. ಫೇಸ್ಬುಕ್ ವಾಲ್ ಮೇಲೂ ಅವುಗಳದೇ ಚಿತ್ತಾರ. ಇನ್ನು ಬ್ಲಾಗ್ ಕಡೆ ಬಂದ್ರೆ ಸ್ನೇಹ ಭಾವಗಳು ಧುಮ್ಮಿಕ್ಕಿ ಹರಿಯುತ್ತಿದ್ದವು.. ಇಂತಹ ಸಂದರ್ಭದಲ್ಲಿ, ಈಗೆನ್ಮಾಡ್ಲಿ ಅಂತ ತಲೆ ಕೆರೆದುಕೊಂಡಾಗ ಹುಟ್ಟಿದ್ದೇ ಈ ತರ್ಲೆ ಬರಹ!

hi, hello ಗಳಿಂದ ಶುರುವಾಗಿ, ಪಕ್ಕಾ ಲೋಕಲ್ ಪಡ್ಡೆಗಳ ತರಹ ಮಗಾ, ಮಚ್ಚಿಗಳ ತನಕ ಬಂದು ನಿಂತ ಸ್ನೇಹದ ಯಶೋಗಾಥೆ!!!



                  ಅವರದೇ ಗುಡ್ ಮಾರ್ನಿಂಗ್ ನಿಂದ ಶುರುವಾಗಿ, ಮತ್ತವರದೇ ಗುಡ್ ನೈಟ್ ನೊಂದಿಗೆ ಮುಗಿಯುವ ಅದೆಷ್ಟೋ ದಿನಗಳು... ದಿನವಿಡೀ ಹರಟಿದ್ದು...  ಜೊತೆಯಾಗಿ ನಕ್ಕಿದ್ದು...  ಒಂದೇ ಪ್ಲೇಟಿನಲ್ಲಿ ಪಾನಿಪುರಿ ತಿಂದಿದ್ದು... ಮಳೆಯಲ್ಲಿ ಪೂರ್ತಿ ನೆನೆದು ಮನೆಯಲ್ಲಿ ಒಟ್ಟಿಗೆ ಬಯ್ಸಿಕೊಂಡಿದ್ದು... ಎಲ್ಲವೂ ಮನದ ಪರದೆಯ ಮೇಲಿನ ಸುಂದರ ಕೊಲಾಜ್... 

                  ಹಮ್....  ನಾನು......  ಫಸ್ಟ್ ಬೆನ್ಚ್ನಲ್ಲೇ ಕುಳಿತು ನನ್ನ  ಪಾಡಿಗೆ ನಾನು  ನಿದ್ದೆ ಮಾಡೋ ಅಷ್ಟು ಡೀಸೆಂಟ್.. ಪ್ರಶ್ನೆಯೇ ಗೊತ್ತಿಲ್ಲದಿದ್ದರೂ ಹತ್ತು ನಿಮಿಷ ಉತ್ತರ ಕೊಡುವಷ್ಟು ಇಂಟೆಲಿಜೆಂಟ್.. ಮತ್ತು ಲಾಸ್ಟ್ ಬೆಂಚ್ ಅಲ್ಲಿ ಕೈ ಕಟ್ಟಿಕೊಂಡು ಕೂರುವಷ್ಟು ಇನ್ನೋಸೆಂಟ್..!!!!
ಇನ್ನು ನನ್ನ ಗೆಳೆಯರ ಬಳಗವನ್ನ ಕೇಳ್ಬೇಕಾ? ಒಟ್ಟಿನಲ್ಲಿ ನಾವೆಲ್ಲರೂ 'partners in crime!'

                  ಬರೆದ ಪದ್ಯ ಓದಿ, ಲೈಟ್ ಆಗ್ ಹಾಳಾಗ್ತಿರೋ ಹಾಗಿದೆ ಅಂತ ಡೌಟ್ ಪಡ್ತಾ, ಹಳೇ ಹುಡುಗನ ಹೆಸರು ಹೇಳಿ ಕಾಲೆಳೆಯುತ್ತಾ, ಒಂದೇ ಸ್ಟೇಟಸ್ ಕೆಳಗೆ ನೂರು ಕಾಮೆಂಟ್ ಮಾಡೋವಷ್ಟು ತರಲೆಗಳು.. 

                  ಎಕ್ಸಾಂ ತೋಪೆದ್ದಿದ್ದಕ್ಕೂ ಪಾರ್ಟಿ ಕೇಳಿ, ೫ ರುಪಾಯಿ ಡೈರಿ ಮಿಲ್ಕನ್ನೂ ಹಂಚ್ಕೊಂಡ್ ತಿಂದು, ಮಧ್ಯ ರಾತ್ರಿಲಿ ಮ್ಯಾಗಿ ತಿನ್ತಾ,  ಆಕಾಶ ನೋಡಿ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕೋರ್ ನಾವು... 

                  ಲೂಸ್ ಮಾದನಿಂದ ಹಿಡಿದು ಬ್ರಾಡ್ ಪಿಟ್ ವರೆಗೂ, ಸಾನಿಯಾ ಸ್ಕರ್ಟ್ ನಿಂದ ಹಿಡಿದು ಸೋನಿಯಾ ಸೀರೆಯವರೆಗೂ... ನಮ್ಮ ಬಾಯಲ್ಲಿ ಚರ್ಚೆಯಾಗದ ವಿಷಯಗಳಿಲ್ಲ... 'take it easy' ಸಿದ್ಧಾಂತ ನಮ್ದು... ಒಬ್ಬರು ಮಿಸ್ ಆದ್ರು ಮಜವಿಲ್ಲ... ಒಂಥರಾ ವೋಡ್ಕಾ- ಐಸ್ ಕ್ಯೂಬ್ ರಿಲೇಶನ್ಶಿಪ್ಪು ;)

                  ಇಂತಹ ಹುಚ್ಚು ಗೆಳೆಯರೊಡನೆ , ಫೋನಿನಲ್ಲೇ ಶುಭಾಶಯ ವಿನಿಮಯ ಮಾಡಿಕೊಳ್ಳುವುದರೊಂದಿಗೆ 'ಸ್ನೇಹಿತರ ದಿನ' ಮುಗಿದೇ ಹೋಯ್ತು. 'Tom & Jerry' ಕಾರ್ಟೂನನ್ನ  ರೇಡಿಯೋದಲ್ಲಿ ಕೇಳಿದ ಹಾಗೆ!

                  ಅಂದಹಾಗೆ ಎಲ್ಲ ಬ್ಲಾಗ್ ಮಿತ್ರರಿಗೂ ಸ್ನೇಹಿತರ ದಿನದ ಶುಭಾಶಯಗಳು (ಸ್ವಲ್ಪ ತಡವಾಗಿ)... ಬಾಳ ದಾರಿಯಲಿ ಸ್ನೇಹ ದೀವಿಗೆಯ ಹಚ್ಚಿ ಮುನ್ನಡೆಯೋಣ... ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ :)




Monday 8 July 2013

ವಿಪರ್ಯಾಸ

ಮತ್ತೊಂದಿಷ್ಟು ತುಂಡು ಭಾವಗಳು..... 




ಕುಡಿದ ಮತ್ತಿನಲಿ ಬಂದ ಗಂಡ, ಅವಳ ತಾಳಿಯನೆ ಕಿತ್ತ... ಕದಲಲಿಲ್ಲ ಅವಳು, ಬುದ್ಧನಂತಿದ್ದಳು... ಬದುಕನ್ನೇ ಕಸಿದುಕೊಂಡಿರುವಾಗ ತಾಳಿಯೇನು ಎಂಬ ಸ್ತಿಗ್ಧ ಭಾವ... 

***


ಕೆಳಜಾತಿಯವನೆಂದು ಅವನಿಗೆ ಪ್ರಸಾದ ಕೊಡದ ಭಟ್ಟರು.. ಮನೆಗೆ ಬಂದು, ತಿಂಗಳ ಹಿಂದಷ್ಟೇ ಮಗನ ಮದುವೆಯಾದ ಅದೇ ಜಾತಿಯ ಸೊಸೆಯು ಮಾಡಿದ ಪಾಯಸ ಸವಿದರು... 


***


ಲಂಗ ದಾವಣಿ ತೊಟ್ಟು, ದುಂಡು ಮಲ್ಲಿಗೆ ಮುಡಿದ ಮೊಮ್ಮಗಳ ನೋಡಿ, ಮತ್ಯಾರನೋ ನೆನೆದ ಅಜ್ಜನ ಬೊಚ್ಚು ಬಾಯಲ್ಲೊಂದು ಮಿಂಚಂತ ಕಿರುನಗೆ... 


***


ನಿನ್ನೆಯವರೆಗೂ ಸರಿಯಾಗಿದ್ದ ಮನಸಿಗೆ, ಹೆಂಡ ಕುಡಿಸಿದವರಾರು? ನಿನ್ನ ಕಣ್ಣಂಚಿನ ನೋಟದ ನಶೆಗೇ ಇರಬೇಕು.. ನಡುನೇರ ದಾರಿಯಲು ತಿರುತಿರುಗಿ ಬಿತ್ತು... 


***


ಶಶಿಯು ತಾ ಬರಲು ಅವಳ ಮೊಗವರಳಿ, ಅವನ ನೆನಪಲೇ ಇರುಳ ಕಳೆದಳು.. ಬೆಳಕು ಹರಿಯಲು ಮನವು ಮುದುಡಿತು, ಅವಳ ಹೆಸರು ಪಾರಿಜಾತ.. 

***

ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ದೇಶಭಕ್ತಿಯ ಬಗ್ಗೆ ಗಂಟೆಗಟ್ಟಲೇ ಮಾತನಾಡಿದ ಗೆಳೆಯನೊಬ್ಬ, ಮೊನ್ನೆ  'Finally!! got Green Card!' ಎಂದು ಟ್ವೀಟಿಸಿದ್ದಾನೆ... 



Saturday 29 June 2013

ಭಾವಾಂಕುರ


                ಹೊರಗೆ ಜಿಟಿ ಜಿಟಿ ಮಳೆ...  ಮಣ್ಣ ಹಸಿ ವಾಸನೆಯೊಡನೆ, ಕೈಯ್ಯಲ್ಲಿದ್ದ  ಕಾಫೀ ಪರಿಮಳ ಬೆರೆತು.. ಆಹಾ! ಎನ್ನುವಾಗ ಹೊರಬಂದ ಸಾಲುಗಳಿವು... ಕವನವೇನಲ್ಲ.. ತುಂಡು ಭಾವಗಳ ಪೋಣಿಸುವ ಯತ್ನ.. ಒಮ್ಮೆ ಓದಿ ಬಿಡಿ ... 


ಮುಂಗಾರ ಮಳೆಯ ಹನಿ
ಬೆಂಬಿಡದೆ ಕಾಡಿಹುದು 
ಹಸಿ ಮಣ್ಣಿನಂತೆಯೇ ಈ ಒಲವು... 
ಒಲವ  ಹೀರಿದ ಮನ 
ನೆನಪ ಸೂಸುತಿದೆ 
ನಿನ್ನದೇ ಘಮವು ಅನುದಿನವು ... 

ನಿನ್ನೆದೆಯ ಗೂಡಿನಲ್ಲಿ 
ಗುಬ್ಬಚ್ಚಿಯಾಗುವೆನು 
ಕಟ್ಟಿಟ್ಟ ಕನಸ ಸೂರಿನಡಿಗೆ... 
ನನ್ನ ಪ್ರತಿಬಿಂಬವು 
ಮುತ್ತಾಗಬೇಕು 
ನಿನ್ನ ಕಣ್ರೆಪ್ಪೆಯ ಚಿಪ್ಪಿನೊಳಗೆ... 

ತಂಪು ಗಾಳಿಗೆ 
ಮುಂಗುರುಳು ತಾನುಲಿದು  
ಅರಸುತಿದೆ ನಿನ್ನ ಬೆರಳ ತುದಿಯ... 
ಕೆನ್ನೆಯಂಚಿಗೆ 
ಸ್ವಲ್ಪ ಮೆತ್ತಿಬಿಡಲೇ 
ತುಟಿಯ ಮೇಲಿನ ಜೇನ ಹನಿಯ... 

ಜಿನುಗು ಮಳೆಯಲಿ  ನಿನ್ನ 
ಕೈಯ್ಯೊಳಗೆ ಕೈ ಬೆಸೆದು 
ಸಾಗಬೇಕೆನಗೆ ದೂರ ದೂರ... 
ಪ್ರೀತಿ ಸಿಂಚನಕೆ 
ತೊಡೆದುಹೋಗಿದೆ ತಿಮಿರ 
ಮನದ ಮೂಲೆಯಲೊಂದು ಭಾವಾಂಕುರ...!



Saturday 22 June 2013

ಕಪ್ಪು ಬಿಳುಪು

                     ಪುಸ್ತಕಗಳ ರಾಶಿಯ ಮಧ್ಯ ಸೇರಿಹೋಗಿತ್ತದು. ಎನನ್ನೋ ಹುಡುಕುವಾಗ ನನ್ನ ಕಣ್ಣಿಗೆ ಬಿತ್ತು. ಧೂಳು ಕುಡುಗಲು ಹೋಗಿ, ಒಂದೆರಡು ಸೀನ್  ಹೊಡೆದು, ಅದನ್ನ ಕೈಗೆತ್ತುಕೊಂಡೆ. ರಟ್ಟು ಹರಿದ ಹಳೆಯ ಪುಟ್ಟ ಪಟ್ಟಿ. ಏನಿರಬಹುದು ಎಂಬ ಕುತೂಹಲ.  ಓದಲು ಕುಳಿತಾಗ ಹುಲ್ಲು ಕಡ್ಡಿಯೂ ವೆರಿ ಇಂಟೆರೆಸ್ಟಿಂಗ್ ನೋಡಿ !

ಮೊದಲ ಪುಟ... 

ಖಾಲಿ ಪೇಜಿನ ಮೊಲೆಯಲ್ಲಿ ಸ್ಫುಟವಾಗಿ ಬರೆದ ಅಕ್ಷರಗಳು. ಈಗ ಮಬ್ಬಾಗಿವೆ.
ಹೆಸರು :
ತರಗತಿ :
ವಿಷಯ :
ನನ್ನದೇ. ಅರಿವಿಲ್ಲದಂತೆಯೇ ತುಟಿಯಂಚಲಿ ನಗುವು ಮೂಡಿತ್ತು. ಮನದ ಗೂಡಿನಿಂದ ನೆನಪ ಇರುವೆಗಳು ಸಾಲಾಗಿ ಹೊರಬರತೊಡಗಿದ್ದವು. ಹಮ್, ನೆನಪಿದೆ. ಅಪ್ಪನ ಅಕ್ಷರಗಳವು. ಶಾಲೆ ಶುರುವಾಗುವ ಮೊದಲೇ ಪಟ್ಟಿ ಪುಸ್ತಕಗಳನ್ನು ತರಿಸಿ, ಅಮ್ಮ ಬೈಂಡ್ ಹಾಕಿ ಕೊಟ್ಟರೆ, ಅಪ್ಪ ಹೆಸರು ಬರೆದು ಕೊಡುತ್ತಿದ್ದ. ರಜೆ ಮುಗಿದು ಶಾಲೆಗೆ ಹೊರಡುವ ಸಂಭ್ರಮ. ಶಿಕ್ಷಕರು ಹೊಗಳಿದರೆ ಅಟ್ಟಕ್ಕೇರುವ ದಿನಗಳವು . ಕ್ಲಾಸಿನಲ್ಲಿ ಎಲ್ಲರಿಗಿಂತ ಮೊದಲು ಉತ್ತರಿಸಿದರೆ ತಲೆಯ ಮೇಲೆರಡು ಕೊಂಬು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದರೆ ಯುದ್ಧ ಗೆದ್ದ ಸಂಭ್ರಮ. ಆ ಮುಗ್ಧತೆಯ ನೆನೆಪಿಸಿಕೊಳ್ಳುತ್ತಾ ಪುಟ ತಿರುವಿದೆ.

ಪುಟ ಎರಡರ ನಂತರ... 

ಅವು ನಾ ಬರೆದ ಸಾಲುಗಳು. ಕನ್ನಡವೋ, ಪರಿಸರವೋ ತಿಳಿಯಲಿಲ್ಲ. ಯಾವುದೊ ಪಾಠದ್ದಿರಬೇಕು. ಅಕ್ಷರಗಳು ಅಷ್ಟೇನೂ ಸುಂದರವಾಗಿರಲಿಲ್ಲ.  ತಪ್ಪುಗಳಿದ್ದಲ್ಲಿ ಟೀಚರ್ ತಿದ್ದುಕೊಟ್ಟಿದ್ದರು. ಹಲವಾರು ಹೋಮ್ ವರ್ಕ್, ಕ್ಲಾಸ್ ವರ್ಕ್ಗಳು ಪುಟ ತುಂಬಿದ್ದವು. ಒಮ್ಮೆ 'ಗುಡ್' , 'ವೆರಿ ಗುಡ್' ಬಿದ್ದರೆ ಮತ್ತೊಮ್ಮೆ 'ಸುಧಾರಿಸಬೇಕು' ಎಂಬ ರೆಡ್ದಿಂಕಿನ ಮಾರ್ಕು.
ಮೊದಲು ಆಟ, ಸಮಯವಿದ್ದರೆ ಪಾಠ ಎನ್ನುವ ಜಾತಿ ನಂದು (ಮೊದಲಿನಿಂದಲೂ ಹಾಗೇ ;-) ). ಟೀಚರ್ ಗೆ ಹೆದರದಿದ್ದರೂ ಅವರ ಬೆತ್ತಕ್ಕೆ ಹೆದರುತ್ತಿದ್ದೆ. ಒಮ್ಮೆ ಹೋಮ್ ವರ್ಕ್ ಮಾಡದೇ ಸುಳ್ಳು ಹೇಳಿ, ಕೈಗಳು ನೋಡಿದ್ದ ಅವರ ಬೆತ್ತದ ರುಚಿ ಇನ್ನೂ ಮರೆತಿಲ್ಲ .

ಪುಟ ಮೂವತ್ತರ ಆಸುಪಾಸು..

ಒಂದೆರಡು ಪುಟಗಳು ಹರಿದಿದ್ದವು. ನಂತರ ಮತ್ತದೇ ಪಾಠದ ಸಾಲುಗಳು. ಆದರೆ ಕಾಟಾಚಾರಕ್ಕೆ ಬರೆದ್ದಿದ್ದೇನೋ ಅನ್ನುವಂತಿತ್ತು. ಹಾಗೇ ತಿರುವುತ್ತ ಹೋದೆ.

ಐವತ್ತರಾಚೆಗಿನ ಪುಟಗಳು ಖಾಲಿ ಖಾಲಿ...

ಕೊನೆಯ ಪುಟ..

ಎಲ್ಲವೂ ಚೆಲ್ಲಾಪಿಲ್ಲಿ. ಒಂದಿಷ್ಟು ಚಿತ್ರಗಳು, ಮತ್ತಷ್ಟು ಹೆಸರುಗಳು. ಅಲ್ಲಲ್ಲಿ ಗೀಚಿದ್ದು, ಚುಕ್ಕಿ ಆಟ ಆಡಿದ್ದು ಎಲ್ಲವೂ ಸ್ಪಷ್ಟ. 
ಹೆಸರುಗಳನ್ನ ಹೆಕ್ಕಿ ಓದಿದೆ. ಒಂದಿಬ್ಬರನ್ನ ಬಿಟ್ಟರೆ ಮತ್ಯಾರೂ ಸಂಪರ್ಕದಲ್ಲಿಲ್ಲ. ಕೆಲವರು ನೆನೆಪಿಗೂ  ಬರುತ್ತಿಲ್ಲ. ಎಲ್ಲಾ ಎಲ್ಲಿರಬಹುದು? ಅವರಿಗೆ ನನ್ನ ನೆನಪಿದೆಯಾ? ಎಂದುಕೊಳ್ಳುತ್ತಾ ಪಟ್ಟಿ ಮುಚ್ಚಿಟ್ಟೆ. 

                         ಆದರೂ ನನ್ನ ಯೋಚನಾಲಹರಿ ಹರಿಯುತ್ತಲೇ ಇತ್ತು. ಜೀವನಕ್ಕೂ ಈ ಹಳೆ ಪಟ್ಟಿಗೂ ಎಲ್ಲೋ ಬಹಳ ಸಾಮ್ಯವಿದೆ ಅನ್ನಿಸ್ತು. ಬದುಕೇ ಒಂದು ಪಟ್ಟಿಯಾದರೆ, ಪ್ರತಿದಿನವೂ ಒಂದೊಂದು ಪುಟಗಳು. ಅಂತಸ್ತು, ಒಣ ಪ್ರತಿಷ್ಠೆಯ ಬೈಂಡ್ ಹಾಕಿಕೊಂಡು ಸಮಾಜದಲ್ಲಿ ಬದುಕುವ ಹುನ್ನಾರ. ಒಳಗೆ ಹರಿದ ಬನಿಯನ್ ಆದರೂ ಸರಿ, ಹೊರಗೆ ಚಂದದ ಶರ್ಟ್ ಇರಬೇಕು ಎನ್ನುವಂತೆ!
                          
                          ಬಾಲ್ಯವೇ ಮೊದಲ ಪುಟ. ಬಹುಶಃ ಜೀವನದ ಅತ್ಯಂತ ಸುಂದರ ಕ್ಷಣಗಳು. ಅಮ್ಮನ ಮಮತೆ, ಅಪ್ಪನ ಪ್ರೀತಿ, ಹೊಸ ಜಗತ್ತು, ಮುಗ್ಧ ಮನಸಿನ ಸ್ವಚ್ಛ ನಗು ಎಲ್ಲವೂ ಅತಿ ಚೆನ್ನ.  ಒಟ್ಟಿನಲ್ಲಿ ಕುಹಕ, ಕಪಟ, ಕೆಟ್ಟ ಆಲೋಚನೆಗಳಿಗೆ ಅಲ್ಲಿ ಜಾಗವಿರಲಿಲ್ಲ. ನಾವಂದು ಪೋಷಕರ  ಕನಸು. 
                              
                           ನಂತರದ್ದು ಹರೆಯ. ತಪ್ಪ ಸರಿಪಡಿಸಿ ಸರಿ ದಾರಿ ತೋರಲು ಹಲವಾರು ಕೈಗಳು. ಬದುಕ ರಾಗದಲ್ಲಿ ಕೊಂಚ ಏರಿಳಿತ.  ಗೆದ್ದರೂ ಸೋತರೂ ಹೆಚ್ಚು ತಲೆ ಕೆಡಿಸಿಕೊಳ್ಳದ ಭಾವ. ಸಮಾಜಕ್ಕೆ ಅಂಜಿ 'ಡೋಂಟ್ ಕೇರ್' ಮನಸ್ಥಿತಿಗೂ ಒಂದು ಮಿತಿ, ಥೇಟ್ ಪುಟ ಎರಡರಂತೆ.  ಅಲ್ಲಿಗೆ ಬರೀ ನಾನು ನನ್ನ ಕನಸು. 
                           
                           ಅತಿಯಾದ ಹುಮ್ಮಸ್ಸು. ಜೀವನದಲ್ಲಿ ರಿಸ್ಕ್ ಇಲ್ಲದೇ ಮಜವೆಲ್ಲಿ ಎನ್ನುವ ಮನೊಭಾವ . ಕೆಲವು ತಪ್ಪು ನಿರ್ಧಾರಗಳು ಮತ್ತು ಸೋಲು. ಆತ್ಮ ವಿಶ್ವಾಸದಿಂದ ಸೋಲನ್ನು ಹತ್ತಿಕ್ಕಿ ಮತ್ತೆ ಗೆದ್ದವನು ಹೊಸ ಭಾಷ್ಯ ಬರೆದರೆ, ಸೋತವನ ಬದುಕಿನ ಪುಟ ಅಲ್ಲಿಗೆ ಹರಿದಂತೆ. ಅಲ್ಲಿ ನನ್ನ ಕನಸು ನನ್ನದು. 
                            
                            ನಂತರದ್ದು ಯಾಂತ್ರಿಕ  ಬದುಕು ಖಾಲಿ ಹಾಳೆಯಂತೆ . ಆಫೀಸಿನ ಮುಗಿಯದ ಕೆಲಸ, ಸಂಸಾರದ ತಲೆಬಿಸಿ ಹೀಗೆ ಟನ್ಗಳಷ್ಟು ಜವಾಬ್ದಾರಿಗಳು. ಕಲರ್ ಫುಲ್ ಬದುಕಲ್ಲಿ ಕೊನೆಗೆ ಉಳಿಯುವುದು ಕಪ್ಪು ಬಿಳುಪು ನೆನಪಿನ ಕಂತೆಗಳು. ಕನಸ ದಾರಕೆ ನೆನಪ ಪೋಣಿಸುತ, ಬೊಚ್ಚು ಬಾಯಲ್ಲೊಂದು ನಗೆಯ ಚಿಮ್ಮಿಸಿ ಮೊಮ್ಮಕ್ಕಳ ಆಡಿಸುವಲ್ಲಿ ಬದುಕ ಪಟ್ಟಿಗೊಂದು  ಪೂರ್ಣ ವಿರಾಮ. 
                            
                            ಅಷ್ಟರಲ್ಲಿ ಅಮ್ಮನ ಕೂಗು, "ಅದೇನೇ ಓದೋದ್ ಬಿಟ್ಟು ಒಬ್ಬಳೇ ನಗ್ತಿದ್ದೀಯ?" ಎಂದಳು . "ಏನಿಲ್ಲ, ಹಳೆ ಹುಡುಗ ನೆನಪಾದ" ಎಂದೆ. ಅವಳಿಗದು ಕೇಳಲಿಲ್ಲ. ಟಿವಿಯಲ್ಲಿ 'ರಾಧಾ ಕಲ್ಯಾಣ' ಬರುತ್ತಿತ್ತು. 
                                
                                                                
       
               

Tuesday 18 June 2013

ಅವ್ಯಕ್ತ







ಮಳೆ ನಿಂತಿದೆ.. 
ಅವನು ಹಿಡಿದ ಕೊಡೆ ಹಾಗೇ ಇದೆ..

ಅವಳು ಸ್ವಾಭಿಮಾನಿ.. 
ಅವನದು ತೀರ ಹಟ..

ಅವಳು ಇಷ್ಟವಿಲ್ಲದೆ ಹೊರಟವಳು..
ಅವನು ಅವಳಿಗಾಗಿ ನಿಂತವನು..

ಅವಳು ಕನಸ ಬೆಂಬತ್ತಿ ಬದುಕ ದಾರಿ ಹಿಡಿದವಳು..
ಅವನು ಒಲವೇ ಜೀವನವೆಂದು ತಿಳಿದವನು..

ಅವಳು ಕಟ್ಟಿಕೊಂಡ ಗುರಿ ಸಾಧಿಸುವ ಛಲದವಳು..
ಅವನು ಬೆಟ್ಟದಷ್ಟು ಪ್ರೀತಿ ಕೊಡುವವನು.. 

ಅವಳು ಪ್ರತಿ ಹೆಜ್ಜೆಗೂ ಹತ್ತು ಬಾರಿ ಯೋಚಿಸುವವಳು.. 
ಅವನು ಹಿಂದೆ ಮುಂದೆ ನೋಡದೆ ಒಲವ ತೋಡಿಕೊಂಡವನು..

ಅವಳು  ಗುರಿಯ ನೆಪವೊಡ್ಡಿ ತಿರಸ್ಕರಿಸಿದವಳು..
ಅವನು ಬೆಂಬಿಡದೆ ಗೋಗರೆದವನು..

ಅವಳು ಭವಿಷ್ಯದೆಡೆಗೆ ಮುಖಮಾಡಿ ಹೊರಟವಳು..
ಅವನು ದಾರಿ ಮರೆತು ಅಲ್ಲಿಯೇ ನಿಂತವನು.. 

ಮತ್ತೆ ಮಳೆ ಹನಿ ಜಿನುಗಿದೆ..
ಇಬ್ಬರೂ ಮಳೆಗೆ ಮುಖವೊಡ್ಡಿದರು..
ಕಣ್ಣಂಚಿನ ಹನಿ ಕಾಣದಂತೆ ತಿರುಗಿ ಹೊರಟರು..

Thursday 6 June 2013

ಹೀಗೊಂದು ಭಾವ...

ಮತ್ತೆ ಮತ್ತದೇ ಭಾವ
ನೀ ನಕ್ಕ ಹಾಗೆ, ಬಳಿ ನಿಂತ ಹಾಗೆ...
ನಿನ್ನೊಡನೆ ಕಟ್ಟಿರುವ ನೂರಾರು ಕನಸಿಗೆ, 
ಮನಸ ಮೂಲೆಯಿಂದ ನುಸುಳುವ ಭಾವ...
ಮುಂಜಾನೆ ರವಿಕಿರಣ ಮುತ್ತಿಡುವ ಹೊತ್ತಲಿ ,
ನಿನ್ನಯ ಬೆಚ್ಚನೆ ಸ್ಪರ್ಶದ ಭಾವ...
ಮುಸ್ಸಂಜೆ ತಂಗಾಳಿಯಲಿ ಅಲೆಯುತಿರಲು,
ನೀ ಬಂದು ಹಾಡೊಂದ ಗುನುಗುನಿಸಿದ ಭಾವ...
ಕಡಲ ತೀರದ ಮರಳಲಿ,
ನೀನಟ್ಟ ಹೆಜ್ಜೆಯ ಅನುಸರಿಸಿದ ಭಾವ...
ಭಾವ ಭಾವನೆಗಳ ತೊಟ್ಟಿಲಲಿ ಒಂದಾಗುವ ಭಾವ
ಹೇಳು ಗೆಳೆಯಾ ಜೊತೆಯಾಗುವೆಯಾ?